ರಾಮನಾಡ್ ಕೃಷ್ಣನ್ 1918-73. ಭಾರತದ ಪ್ರಸಿದ್ಧ ಕರ್ನಾಟಕ ಸಂಗೀತ ವಿದ್ವಾಂಸರು. ಇವರನ್ನು ರಾಮನಾಥಪುರಂ ಕೃಷ್ಣನ್ ಎಂದೂ ಕರೆಯುವುದಿದೆ. ಜನಿಸಿದ್ದು (14 ಸೆಪ್ಟೆಂಬರ್ 1918) ಕೇರಳದ ಆಲೆಪ್ಪಿ ಎಂಬಲ್ಲಿ. ತಂದೆ ರಾಮನಾಡಿನ ವೈದ್ಯನಾಥ ಅಯ್ಯರ್; ತಾಯಿ ಬೃಹನ್ನಾಯಕಿ. ಈ ದಂಪತಿಗಳಿಗೆ ಹುಟ್ಟಿದ ಆರು ಮಂದಿ ಪುತ್ರರೂ ಒಂದಲ್ಲ ಒಂದು ಕಲೆಯಲ್ಲಿ ನಿಷ್ಣಾತರಾಗಿದ್ದರು. ತಮ್ಮ ಆರನೆಯ ವಯಸ್ಸಿಗೇ ಸಂಗೀತಾಭಿರುಚಿ ಮೂಡಿಸಿಕೊಂಡ ಕೃಷ್ಣನ್ ರಾಮನಾಡಿನ ಲಕ್ಷ್ಮೀನಾರಾಯಣ ಅಯ್ಯರ್ ಎಂಬವರಲ್ಲಿ ಸಂಗೀತದ ಪ್ರಾಥಮಿಕ ಶಿಕ್ಷಣ ಪಡೆದುಕೊಂಡರು. ಬಳಿಕ ಆಗಿನ ಮದರಾಸು ರಾಜ್ಯದ ರಾಮನಾಡ್‍ನಲ್ಲಿ (ಈಗಿನ ತಮಿಳುನಾಡು ರಾಜ್ಯದ ರಾಮನಾಥಪುರಂ) ಇದ್ದ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಸಿ.ಎಸ್.ಶಂಕರಶಿವಂ ಎಂಬವರಲ್ಲಿ ಸಂಗೀತ ಶಿಕ್ಷಣವನ್ನು ಪಡೆದರು. ತಮ್ಮ 14ನೆಯ ವಯಸ್ಸಿಗೆ ಸಂಗೀತ ಕಚೇರಿ ಮಾಡಲು ಪ್ರಾರಂಭಿಸಿದರು.

ಮುಂದೆ ಸುಪ್ರಸಿದ್ಧ ಸಂಗೀತಗಾರರಾಗಿದ್ದ ಜಿ. ಎನ್. ಬಾಲಸುಬ್ರಹ್ಮಣ್ಯಮ್ (1910-65) ಅವರ ಪ್ರಭಾವಕ್ಕೆ ಒಳಗಾದರು. ಬಳಿಕ ಮದರಾಸಿಗೆ ಬಂದು ನೆಲಸಿ ಅಲ್ಲಿನ ಕಾಲೇಜ್ ಆಫ್ ಕರ್ನಾಟಕ್ ಮೂಸಿಕ್‍ನಲ್ಲಿ ವಿದ್ವಾನ್ ಪದವಿ ಪಡೆದರು. ಆಗಿನ ಕಾಲಕ್ಕೆ ಪ್ರಸಿದ್ಧ ವೀಣಾ ವಿದುಷಿಯೆನಿಸಿದ್ದ ವೀಣಾ ಧನಮ್ಮಾಳ್ (ವೀಣಾಧನಂ: 1868-1938) ಎಂಬವರ ಸಂಗೀತ ಕಚೇರಿಯಿಂದ ಪ್ರಭಾವಿತರಾದುದಲ್ಲದೆ ಆಕೆಯ ಇಬ್ಬರು ಮೊಮ್ಮಕ್ಕಳಾದ ಟಿ. ಬೃಂದಾ ಮತ್ತು ಟಿ. ಮುಕಾ ಅವರಿಂದ ಕ್ಷೇತ್ರಜ್ಞ ಪದಜಾವಳಿಗಳನ್ನು ಕೃಷ್ಣನ್ ಕಲಿತರು. ಅಂತೆಯೇ ಕಾಂಚೀಪುರದ ನಾಯನ ಪಿಳ್ಳೆ ಎಂಬವರ ಶಿಷ್ಯ ಎನ್. ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಎಂಬ ಸಂಗೀತ ವಿದ್ವಾಂಸರಲ್ಲೂ ಸಂಗೀತಾಭ್ಯಾಸ ಮಾಡಿದರು. ಕೃಷ್ಣನ್ ಅನೇಕ ದೇಶೀಯ ಹಾಗೂ ವಿದೇಶಿಯರಿಗೆ ಸಂಗೀತ ಕಲಿಸಿದರು. ಅವರ ಪೈಕಿ ಜಾನ್ ಹಿಗ್ಗಿನ್ಸ್ ಒಬ್ಬರಾಗಿದ್ದರು.

ಕೃಷ್ಣನ್ ಅವರದು ಇಂಪಾದ ಶಾರೀರ; ಭಾವಪೂರ್ಣ, ಹೃದಯಂಗಮ ಹಾಡುಗಾರಿಕೆ. ರಾಗಲಾಪನೆ ಮತ್ತು ಕಲ್ಪನಾಸ್ವರಗಳಲ್ಲಿ ವಿಶೇಷವಾದ ಪ್ರೌಢಿಮೆ ಇವರಿಗಿತ್ತು. ಬಹುದಾರಿ, ಬೇಗಡೆ, ಪೂರ್ಣಷಡ್ಜ, ದೇವಗಾಂಧಾರಿ, ಷಹನ, ವರಾಳಿ ಮುಂತಾದ ರಾಗಗಳನ್ನು ಹಾಡುವುದೆಂದರೆ ಕೃಷ್ಣನ್ ಅವರಿಗೆ ಬಲು ಅಚ್ಚುಮೆಚ್ಚು.

ಕೃಷ್ಣನ್ ಮದರಾಸಿನ ಕಾಲೇಜ್ ಆಫ್ ಕರ್ನಾಟಿಕ್ ಮೂಸಿಕ್‍ನಲ್ಲಿ ಕೆಲವುಕಾಲ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಅಮೆರಿಕ ಸಂಯುಕ್ತ ಸಂಸ್ಥಾನಗಳ ವೆಸ್ಲಿಯಿನ್ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಸಂಗೀತದ ಸಂದರ್ಶಕ ಪ್ರಾಧ್ಯಾಪಕರಾಗಿ ಭೇಟಿ ನೀಡಿದರು (ಸೆಪ್ಟೆಂಬರ್ 1972). ಅಲ್ಲಿ ಇವರನ್ನು ಸಂಗೀತ ವಿದ್ವಾಂಸರ ವಿದ್ವಾಂಸ ಎಂದು ಸಂಬೋಧಿಸಲಾಗುತ್ತಿತು. ಕೃಷ್ಣನ್ 1973 ಜನವರಿ 29ರಂದು ಮದರಾಸಿನಲ್ಲಿ ನಿಧನರಾದರು.
(ಆರ್.ಎನ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ